ದೊಡ್ಡಪತ್ರೆ   
ಲ್ಯಾಮಿಯೇಸೀ (ಲೇಬಿಯೇಟೀ) ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಕೋಲಿಯಸ್ ಅಂಬಾಯ್‍ನಿಕಸ್ ಅಥವಾ ಕೋ. ಆ್ಯರೊಮ್ಯಾಟಿಕಸ್ ಎಂಬುದು ಇದರ ಶಾಸ್ತ್ರೀಯ ಹೆಸರು, ಇದಕ್ಕೆ ಇಂಡಿಯನ್ ಬೊರೇಜ್ ಎಂಬ ಬಳಕೆಯ ಇಂಗ್ಲಿಷ್ ಹೆಸರುಂಟು.  ಇದು ಮೂಲತಃ ಈಸ್ಟ್ ಇಂಡೀಸ್ ದ್ವೀಪಗಳ ಸಸ್ಯ. ಇದರ ಆರ್ಥಿಕ ಪ್ರಾಮುಖ್ಯದಿಂದಾಗಿ ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಅನೇಕ ದೇಶಗಳಲ್ಲಿ ಇದನ್ನು ಬೆಳಸಲಾಗುತ್ತಿದೆ.  ದೊಡ್ಡಪತ್ರೆ ಒತ್ತಾಗಿ ಕವಲೊಡೆದು ಸುಮಾರು ಳಿ m. ಎತ್ತರದ ಚಿಕ್ಕಪೊದೆಯಾಗಿ ಬೆಳೆಯುವುದು. ಎಲೆಗಳು ದಪ್ಪ ಹಾಗೂ ರಸಭರಿತವಾಗಿವೆ. ಇವಕ್ಕೆ ಒಂದು ಬಗೆಯ ಆಹ್ಲಾದಕರ ವಾಸನೆ ಇದೆ. ಗಿಡ ಬೆಳೆಯುವ ಸ್ಥಳದಲ್ಲಿ ಈ ಕಂಪು ಹರಡಿರುತ್ತದೆ. ಎಲೆಗಳ ವಾಸನೆಗೆ ಕಾರಣ ಇವುಗಳಲ್ಲಿರುವ ಕಾರ್ವಕ್ರಾಲ್ ಎಂಬ ಎಣ್ಣೆ. ಮೊತ್ತ ಅತ್ಯಲ್ಪವಾದರೂ ಅದರ ಸುವಾಸನೆ ಅಪರಿಮಿತವಾದುದು. ಈ ಕಾರಣದಿಂದಾಗಿಯೇ ಬಹಳ ಹಿಂದಿನಿಂದಲೂ ದೊಡ್ಡ ಪತ್ರೆಯ ಎಲೆಗಳನ್ನು ಮಾಂಸದ ತಿಂಡಿ ತಿನಸುಗಳಿಗೆ ಹಾಗೂ ಕೋಸಂಬರಿಗೆ ಸುವಾಸನೆ ಕೊಡಲು ಉಪಯೋಗಿಸಲಾಗುತ್ತಿದೆ.  ದ್ರಾಕ್ಷಾರಸ, ಬೀರ್ ಮೊದಲಾದ ಮಾದಕ ಪಾನೀಯಗಳಿಗೆ ಸುವಾಸನೆ ಕೊಡಲು ಇದನ್ನು ಬಳಸುವುದಿದೆ.

ಆಯುರ್ವೇದ ವೈದ್ಯಪದ್ಧತಿಯಲ್ಲಿ ಇದರ ಎಲೆಗಳನ್ನು ಮೂತ್ರಪಿಂಡದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕೆಮ್ಮು, ಆಸ್ತಮಾಗಳಲ್ಲಿ ಇದು ಶಮನಕಾರಿ, ಕೆಲವು ಬಗೆಯ ಒಗ್ಗದಿಕೆಗಳಿಂದ ಮೈಯಲ್ಲಿ ಗಂದೆಯಾದರೆ ದೊಡ್ಡಪತ್ರೆಯ ರಸವನ್ನು ಹೇರಳೆಕಾಯಿ ರಸದೊಂದಿಗೆ ಸೇರಿಸಿ ಮೈಗೆಲ್ಲ ಚೆನ್ನಾಗಿ ತಿಕ್ಕಿ ಸ್ನಾನಮಾಡಿಸುವ ವಾಡಿಕೆ ಇದೆ. ಸೊಪ್ಪಿನಿಂದ ತಯಾರಿಸುವ ತಂಬಳಿ, ಚಟ್ನಿ ಮುಂತಾದವಕ್ಕೆ ಜ್ವರನಿವಾರಕ ಗುಣವುಂಟು.
(ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ